![]() |
| Uttara kannada district |
1. ಕಾರವಾರದಲ್ಲಿ 298 ಕೋಟಿ ರೂ. ವೆಚ್ಚದ ಆರೋಗ್ಯ ಕ್ರಾಂತಿ ಜಿಲ್ಲೆಯ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರವು ಎರಡು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದೆ. ಕಾರವಾರದಲ್ಲಿ 198 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 450 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಂಡಿದೆ. ಇದರೊಂದಿಗೆ, ಜಿಲ್ಲೆಯ ಜನರಿಗೆ ಸ್ಥಳೀಯವಾಗಿ ಸುಧಾರಿತ ಚಿಕಿತ್ಸೆ ನೀಡಲು ಕಾರವಾರದಲ್ಲಿ ಹೊಸದಾಗಿ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಉತ್ತರ ಕನ್ನಡ ಜಿಲ್ಲೆಯ ಜನರಿಗೆ ದೊಡ್ಡ ವೈದ್ಯಕೀಯ ಸೇವೆ ದೊರೆಯಲಿದೆ, ಹೃದಯ, ನರ, ಕ್ಯಾನ್ಸರ್ ಮುಂತಾದ ವಿಶೇಷ ಚಿಕಿತ್ಸಾ ವಿಭಾಗಗಳು ಇರಲಿವೆ, ಈಗ ದೊಡ್ಡ ಚಿಕಿತ್ಸೆಗೆ ಮಂಗಳೂರು ಅಥವಾ ಹುಬ್ಬಳ್ಳಿ ಹೋಗಬೇಕಾಗಿರುವ ಸಮಸ್ಯೆ ಕಡಿಮೆಯಾಗಲಿದೆ
2. ತದಡಿ ಪ್ರವಾಸೋದ್ಯಮದ ಅಭಿವೃದ್ಧಿ ಉತ್ತರ ಕನ್ನಡದ ನೈಸರ್ಗಿಕ ಸೊಬಗನ್ನು ಬಳಸಿಕೊಳ್ಳಲು ತದಡಿ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಅಡಿಯಲ್ಲಿ ಇಲ್ಲಿ ಪರಿಸರ ಸ್ನೇಹಿ ವಸತಿ ವ್ಯವಸ್ಥೆ, ಪ್ರವಾಸಿ ಮಾಹಿತಿ ಕೇಂದ್ರಗಳು ಮತ್ತು ಪರಿಸರ ಸ್ನೇಹಿ ವಾಕಿಂಗ್ ಕಾರಿಡಾರ್ (Walking Corridor) ನಿರ್ಮಿಸಲಾಗುವುದು .
3. ಗೋಕರ್ಣದಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್ ಕ್ರೀಡೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ‘ಸಶಕ್ತ ಕರ್ನಾಟಕ’ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಗೋಕರ್ಣದಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್ ಆಯೋಜಿಸಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ 10 ಲಕ್ಷ ರೂ. ಅನುದಾನ ನೀಡಲಾಗಿದೆ.
4. ಮೀನುಗಾರರಿಗೆ ಸುಸಜ್ಜಿತ ಮಾರುಕಟ್ಟೆ ಜಿಲ್ಲೆಯ ಮೀನುಗಾರರ ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಮತ್ತು ಆಧುನಿಕ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು. ಉತ್ತಮ ಶೀತಗೃಹ ಮತ್ತು ಸ್ವಚ್ಛತೆಯ ವ್ಯವಸ್ಥೆ, ಮೀನು ಸಂಗ್ರಹಣೆ ಮತ್ತು ಮಾರಾಟಕ್ಕೆ ಉತ್ತಮ ಸೌಲಭ್ಯ, ಮೀನುಗಾರರಿಗೆ ನೇರವಾಗಿ ಮಾರಾಟ ಮಾಡುವ ಅವಕಾಶ, ಪರಿಣಾಮ ಮೀನುಗಾರರ ಆದಾಯ ಹೆಚ್ಚಳಕರಾವಳಿ ಆರ್ಥಿಕತೆಗೆ ಬಲ. ಮೀನುಗಾರಿಕೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ₹20 ಕೋಟಿ. ರಾಜ್ಯದಲ್ಲಿ ಮೀನುಗಾರಿಕೆ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಗೆ ₹20 ಕೋಟಿ ಅನುದಾನ ನೀಡಲಾಗಿದೆ. ಕರಾವಳಿ ಮೀನುಗಾರಿಕೆ ಹಳ್ಳಿಗಳಿಗೆ ರಸ್ತೆ ಸುಧಾರಣೆ, ಮೀನುಗಳನ್ನು ಮಾರುಕಟ್ಟೆಗೆ ತಲುಪಿಸಲು ಸುಲಭ ವ್ಯವಸ್ಥೆ, ಕರಾವಳಿ ಮೂಲಸೌಕರ್ಯ ಅಭಿವೃದ್ಧಿ
5. ಹಳಿಯಾಳ ಮತ್ತು ಮುಂಡಗೋಡ ತಾಲೂಕುಗಳಿಗೆ ನೀರಾವರಿ ಜಲಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಈ ಸಾಲಿನಲ್ಲಿ ಜಿಲ್ಲೆಯ ಪ್ರಮುಖ ಕೆರೆ ತುಂಬಿಸುವ ಯೋಜನೆಗಳನ್ನು ಪೂರ್ಣಗೊಳಿಸಲು ಗುರಿ ಇಟ್ಟುಕೊಳ್ಳಲಾಗಿದೆ. ಹಳಿಯಾಳ ಕೆರೆ ತುಂಬಿಸುವ ಯೋಜನೆ ಮತ್ತು ಮುಂಡಗೋಡ ಕೆರೆ ತುಂಬಿಸುವ ಯೋಜನೆಗಳು 2026-27ನೇ ಸಾಲಿನಲ್ಲಿ ಪೂರ್ಣಗೊಳ್ಳಲಿವೆ. ಈ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಕೃಷಿಗೆ ಬೇಕಾದ ನೀರಾವರಿ ಸುಧಾರಣೆಯಾಗಲಿದೆ. ಇದರಿಂದ ರೈತರಿಗೆ ವರ್ಷಪೂರ್ತಿ ಕೃಷಿ ಮಾಡಲು ಅನುಕೂಲವಾಗುವ ಸಾಧ್ಯತೆ ಇದೆ. ಜೊತೆಗೆ ಭೂಗರ್ಭಜಲ ಮಟ್ಟವೂ ಹೆಚ್ಚುವ ನಿರೀಕ್ಷೆ ಇದೆ.
6. ಸಿದ್ಧಾಪುರ ಮತ್ತು ಶಿರಸಿ ತಾಲೂಕುಗಳಲ್ಲಿ 3 ಹೊಸ ಬಾಂಧಾರಗಳು ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ಜಿಲ್ಲೆಯ ಮೂರು ಕಡೆ ಸೇತುವೆ ಸಹಿತ ಬಾಂಧಾರಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ:
• ಸಿದ್ಧಾಪುರ ತಾಲೂಕಿನಲ್ಲಿ ಒಂದು ಹೊಸ ಬಾಂಧಾರ.
• ಶಿರಸಿ ತಾಲೂಕಿನ ಸೋರೆಗುಪ್ಪದಲ್ಲಿ ಸೇತುವೆ ಸಹಿತ ಬಾಂಧಾರ.
• ಸಿದ್ಧಾಪುರ ತಾಲೂಕಿನ ಶಿರಳಗಿಯಲ್ಲಿ ಸೇತುವೆ ಸಹಿತ ಬಾಂಧಾರ.
7. ಹಳಿಯಾಳ ಮತ್ತು ಶಿರಸಿಯಲ್ಲಿ ಶ್ರಮಿಕ ವಸತಿ ಶಾಲೆಗಳು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಜಿಲ್ಲೆಯಲ್ಲಿ ಶ್ರಮಿಕ ವಸತಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಯೋಜನೆಯ ಮೊದಲ ಹಂತದಲ್ಲಿ ಹಳಿಯಾಳದಲ್ಲಿ ಒಂದು ಶಾಲೆ ಮತ್ತು ಎರಡನೇ ಹಂತದಲ್ಲಿ ಶಿರಸಿಯಲ್ಲಿ ಮತ್ತೊಂದು ಶಾಲೆಯನ್ನು ಪ್ರಾರಂಭಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
8. ಕರಾವಳಿ ಪ್ರವಾಸೋದ್ಯಮ: ಇದರ ಜೊತೆಗೆ ಕರಾವಳಿ ಜಿಲ್ಲೆಗಳ ಸಮುದ್ರ ಸಂಪನ್ಮೂಲಗಳ ಬಳಕೆ ಮತ್ತು ಬ್ಲೂ ಇಕಾನಮಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೊಸ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದೆ. ಈ ನೀತಿಗಳ ಮೂಲಕ ಮೀನುಗಾರಿಕೆ, ಸಮುದ್ರ ಸಂಪನ್ಮೂಲ ಬಳಕೆ ಮತ್ತು ಕರಾವಳಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳಿಗೆ ಇದು ಹೆಚ್ಚಿನ ಆರ್ಥಿಕ ಅವಕಾಶಗಳನ್ನು ನೀಡುವ ಸಾಧ್ಯತೆ ಇದೆ. ಸೀ ಪ್ಲೇನ್ ಮತ್ತು ಹೆಲಿ ಟ್ಯಾಕ್ಸಿ ಕರಾವಳಿ ತೀರದ ಪ್ರವಾಸೋದ್ಯಮವನ್ನು ಆಧುನೀಕರಿಸಲು ಸೀ ಪ್ಲೇನ್ (Sea Plane) ಮತ್ತು ಹೆಲಿ ಟ್ಯಾಕ್ಸಿ (Heli Taxi) ಸೇವೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ . ಇದಲ್ಲದೆ, ಪ್ರವಾಸಿಗರನ್ನು ಆಕರ್ಷಿಸಲು ಜಾಯ್ ರೈಡ್ (Joy Ride) ಮತ್ತು ರಿವರ್ ಕ್ರೂಸ್ (River Cruise) ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುವುದು .
9. ಸಂಪರ್ಕ ವೃದ್ಧಿಗೆ 300 ಕಾಲು ಸಂಕಗಳ ಯೋಜನೆ ಜಿಲ್ಲೆಯ ಮಲೆನಾಡು ಮತ್ತು ಕರಾವಳಿ ಭಾಗದ ಕಾಡುಗಳಲ್ಲಿ ವಾಸಿಸುವ ಜನರ ಮತ್ತು ಶಾಲಾ ಮಕ್ಕಳ ಅನುಕೂಲಕ್ಕಾಗಿ ರಾಜ್ಯಾದ್ಯಂತ ನಿರ್ಮಿಸಲಿರುವ 300 ಕಾಲು ಸಂಕಗಳ (Foot Bridges) ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೂ ಹೆಚ್ಚಿನ ಆದ್ಯತೆ ಸಿಗಲಿದೆ .
ಈ ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಮೂಲಸೌಕರ್ಯ, ಆರೋಗ್ಯ ಮತ್ತು ಆರ್ಥಿಕತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

