ಕೊಲೆಗಡುಕರು ನಮ್ಮ ನಡುವೆ… ಎಚ್ಚರ ಅಗತ್ಯ!

Halli News team
0

‘ಮಳಗಿಯ ಕಳಂಕವನ್ನು ದೂರ ಮಾಡಿದ ಉತ್ತರ ಕನ್ನಡ ಪೊಲೀಸ್’

 ಶಾಂತಿಯುತ ಹಳ್ಳಿಯಾಗಿ ಹೆಸರು ಪಡೆದ ಮುಂಡಗೋಡು ತಾಲೂಕಿನ ಮಳಗಿ ಗ್ರಾಮವನ್ನು ಇತ್ತೀಚೆಗೆ ನಡೆದ ಭೀಕರ ಕೊಲೆ ಪ್ರಕರಣ ಬೆಚ್ಚಿಬೀಳುವಂತೆ ಮಾಡಿದೆ. ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ವೃದ್ಧೆಯೊಬ್ಬಳನ್ನು ಕ್ರೂರವಾಗಿ ಕೊಲೆ ಮಾಡಿದ ಘಟನೆ ಗ್ರಾಮಸ್ಥರ ಮನಸ್ಸನ್ನು ಮಿಡಿಯುವಂತೆ ಮಾಡಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿತ್ತು. ಆದರೆ ನಿರಂತರ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದೆ. ಈ ಘಟನೆ ಕೇವಲ ಒಂದು ಕೊಲೆ ಪ್ರಕರಣವಾಗಿರದೇ, ನಮ್ಮ ಸುತ್ತಮುತ್ತಲೇ ಇರುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುವ ಘಟನೆಯಾಗಿ ಗಮನ ಸೆಳೆಯುತ್ತಿದೆ.

Mundagod Malagi event
ಒಂದು ವಾರದ ಹಿಂದೆ ಮುಂಡಗೋಡು ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದ ಭೀಕರ ಕೊಲೆ ಪ್ರಕರಣವು ಇಡೀ ಊರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಸಾಮಾನ್ಯವಾಗಿ ಶಾಂತಿಯುತವಾಗಿ ಬದುಕುವ ಈ ಹಳ್ಳಿ, ಆ ದಿನದಿಂದ ಭಯ ಮತ್ತು ಆತಂಕದ ನೆರಳಿನಲ್ಲಿ ಮುಳುಗಿತ್ತು. ಮಳಗಿ ಸರ್ಕಲ್‌ನಿಂದ ಅಲ್ಪ ದೂರದಲ್ಲಿರುವ ಶಿರಸಿ–ಮುಂಡಗೋಡು ರಸ್ತೆಗೆ ಹೊಂದಿಕೊಂಡಿರುವ ಕೊಳಗಿ ಕ್ರಾಸ್ ಅರಣ್ಯ ಪ್ರದೇಶದಲ್ಲಿ ರುಂಡವಿಲ್ಲದೆ ಕೇವಲ ಮುಂಡ ಮಾತ್ರ ಪತ್ತೆಯಾಗಿತ್ತು. ಕಟ್ಟಿಗೆ ತರಲು ಹೋದ ಕೆಲವು ಮಹಿಳೆಯರ ಕಣ್ಣಿಗೆ ಈ ಭಯಾನಕ ದೃಶ್ಯ ಬಿದ್ದ ಕ್ಷಣವೇ ಊರಿಗೆ ನಡುಕ ಮೂಡಿಸಿತು. ಅವರು ಆತಂಕದಿಂದ ಓಡಿಬಂದು ಗ್ರಾಮಸ್ಥರಿಗೆ ತಿಳಿಸಿದ ನಂತರ ಈ ಘಟನೆ ಎಲ್ಲರಿಗೂ ಗೊತ್ತಾಯಿತು.

ಮೊದಲಿಗೆ ಮೃತದೇಹ ಯಾರದ್ದು ಎಂಬುದು ಗೊತ್ತಾಗದೇ ಊರಿನಲ್ಲಿ ತೀವ್ರ ಆತಂಕ ವಾತಾವರಣ ನಿರ್ಮಾಣವಾಗಿತ್ತು. ನಂತರ ಒಂದು–ಎರಡು ದಿನಗಳಲ್ಲಿ ಅದು ಮಳಗಿ ಗ್ರಾಮದ ಶಿವಕ್ಕ ಪಾಟೀಲ ಎಂಬ ವೃದ್ಧೆಯದ್ದೆಂಬುದು ಸ್ಪಷ್ಟವಾಯಿತು. ಈ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಗ್ರಾಮಸ್ಥರು ದುಃಖದಲ್ಲಿ ಮುಳುಗಿದರು. ಮನೆಯವರು ಕಣ್ಣೀರಿನ ಮಧ್ಯೆ ಅಂತ್ಯಕ್ರಿಯೆ ಹಾಗೂ ವಿಧಿವಿಧಾನಗಳನ್ನು ನೆರವೇರಿಸಿದರೂ, ಶಿವಕ್ಕ ಅವರ ಸಾವಿನ ಹಿಂದೆ ಇರುವ ನಿಜವಾದ ಕಾರಣ ಮಾತ್ರ ಕತ್ತಲೆಯಲ್ಲೇ ಉಳಿದಿತ್ತು.

ಶಿವಕ್ಕ ಪಾಟೀಲ ಅವರು ಸರಳ ಸ್ವಭಾವದ, ಎಲ್ಲರೊಂದಿಗೆ ಒಳ್ಳೆಯವಾಗಿ ಬೆರೆತು ಬದುಕುತ್ತಿದ್ದ ಮಹಿಳೆ ಎಂದು ಗ್ರಾಮಸ್ಥರು ನೆನಪಿಸಿಕೊಂಡಿದ್ದಾರೆ. ಅಂಥ ಮಹಿಳೆಗೆ ಈ ರೀತಿ ದಾರುಣ ಅಂತ್ಯ ಎದುರಾಗಿರುವುದು ಊರಿನ ಜನರ ಮನಸ್ಸನ್ನು ಮಿಡಿಯುವಂತೆ ಮಾಡಿತ್ತು. “ನಿನ್ನೆತನಕ ನಮ್ಮ ನಡುವೆ ನಗುತ್ತಾ ಮಾತಾಡುತ್ತಿದ್ದ ಅಕ್ಕ ಇಂದು ಇಲ್ಲ” ಎಂಬ ನೋವು ಹಲವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಈ ಪ್ರಕರಣದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದವು. ಮನೆಯವರಿಂದಲೇ ಏನಾದರೂ ನಡೆದಿರಬಹುದೇ ಎಂಬ ಗುಸು ಗುಸು ಮಾತುಗಳೂ ಕೇಳಿಬರುತ್ತಿದ್ದವು. ಕೆಲವರು ಪ್ರಕರಣವೇ ಮುಚ್ಚಿಹೋಗಬಹುದು ಎಂಬ ಭಯವನ್ನೂ ವ್ಯಕ್ತಪಡಿಸಿದ್ದರು. ಇಡೀ ಮಳಗಿ ಗ್ರಾಮವೇ ಆತಂಕ ಮತ್ತು ಅನುಮಾನಗಳ ನೆರಳಿನಲ್ಲಿ ಬದುಕುತ್ತಿದ್ದಂತೆ ಕಂಡುಬರುತ್ತಿತ್ತು.

ಆದರೆ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಂತೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ಷ್ಮ ತನಿಖೆ ನಡೆಸಿ ಕೊಲೆಗಡುಕನನ್ನು ಪತ್ತೆ ಹಚ್ಚಿದೆ. ಕೊನೆಗೂ ಕೊಲೆಯಾದ ಶಿವಕ್ಕ ಪಾಟೀಲ ಅವರ ಮನೆಯ ಎದುರು ಬಾಡಿಗೆಗೆ ವಾಸವಾಗಿದ್ದ ಕೃಷ್ಣ ಮೇಧಾರ ಎಂಬ ವ್ಯಕ್ತಿಯೇ ಈ ಹತ್ಯೆ ನಡೆಸಿದ್ದಾನೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಈತನ ಮಾವನ ಮನೆ ಶಿವಕ್ಕ ಅವರ ಮನೆ ಎದುರಲ್ಲೇ ಇದ್ದದ್ದು ಗಮನಾರ್ಹ. ಮೂಲತಃ ಹಾನಗಲ್ ತಾಲೂಕಿನವನಾದ ಕೃಷ್ಣ ಮೇಧಾರ, ಶಿವಕ್ಕರನ್ನು ಹಾನಗಲ್ ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದು ನಂಬಿಸಿ ತನ್ನ ಬೈಕ್ ಮೇಲೆ ಕೂರಿಸಿಕೊಂಡು ಹೋಗಿದ್ದಾನೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಬದಲು ಕೊಳಗಿ ಕ್ರಾಸ್ ಅರಣ್ಯದಲ್ಲಿ ಅವರನ್ನು ಕ್ರೂರವಾಗಿ ಕೊಲೆ ಮಾಡಿ, ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿದ್ದಾನೆ.

ಮಹಿಳೆಯ ಮೇಲೆ ದಾಳಿ ನಡೆಸಿದ ಬಳಿಕ ಶಿವಕ್ಕ ಅವರ ರುಂಡನ್ನು ಹಾನಗಲ್ ತಾಲೂಕಿನ ಕಾಮನಹಳ್ಳಿ ಭಾಗದಲ್ಲಿರುವ ಮಾವಿನ ತೋಟದಲ್ಲಿ ಬಚ್ಚಿಟ್ಟಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ. ಮಾನವೀಯತೆ ಮರೆಯುವಂತಹ ಈ ಕೃತ್ಯವನ್ನು ಕೇಳಿದಾಗಲೇ ಜನರ ಮನಸ್ಸು ನಡುಗುತ್ತದೆ.

ವಾರದಷ್ಟು ಕಾಲ ಆರೋಪಿಯ ಪತ್ತೆಯಾಗದೇ ಇದ್ದುದರಿಂದ ಮಳಗಿ ಗ್ರಾಮದ ಜನರಲ್ಲಿ ಭಯ ಮತ್ತು ಆತಂಕ ಉಂಟಾಗಿತ್ತು. ಈ ಘಟನೆ ಊರಿನ ಗೌರವಕ್ಕೂ ಕಳಂಕ ತಂದುಕೊಟ್ಟಂತಾಗಿತ್ತು. “ನಮ್ಮ ಊರಲ್ಲಿ ಇಂತಹ ದಾರುಣ ಘಟನೆ ಹೇಗೆ ನಡೆಯಿತು?” ಎಂಬ ಪ್ರಶ್ನೆ ಪ್ರತಿಯೊಬ್ಬರ ಮನದಲ್ಲೂ ಮೂಡಿತ್ತು.

ಆದರೆ ಪೊಲೀಸರು ನಿರಂತರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇಂದು ಆರೋಪಿಯನ್ನು ಮಳಗಿಯಲ್ಲಿರುವ ಅವನ ಮಾವನ ಮನೆಗೆ ಕರೆತಂದಾಗಲೇ ಇಡೀ ಊರಿಗೆ ಕೊಲೆಗಡುಕನ ನಿಜಸ್ವರೂಪ ಗೊತ್ತಾಯಿತು. ಅಲ್ಲಿಯೇ ಅವನ ಹೆಂಡತಿ ಹಾಗೂ ಮಕ್ಕಳು ವಾಸಿಸುತ್ತಿದ್ದರು. ಮನೆ ಎದುರೇ ಇಂತಹ ವ್ಯಕ್ತಿ ಇದ್ದಾನೆ ಎಂಬ ವಿಚಾರ ಕೇಳಿ ಹಲವರು ಬೆಚ್ಚಿಬಿದ್ದರು.

ಆರೋಪಿಯ ಬಂಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಮಳಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ವಾರದಿಂದ ಕಾಡುತ್ತಿದ್ದ ಭಯಕ್ಕೆ ಕೊನೆ ಕಂಡಂತೆ ಜನರು ಭಾವಿಸಿದರು. ಗ್ರಾಮದಲ್ಲಿ “ನ್ಯಾಯ ಜಯಿಸಿದೆ” ಎಂಬ ಮಾತುಗಳು ಕೇಳಿಬಂದವು.

ಪರಿಚಯದ ಹೆಸರಿನಲ್ಲಿ ನಂಬಿಕೆ ಮೂಡಿಸಿಕೊಂಡು ವೃದ್ಧೆಯ ಜೀವ ಕಸಿದುಕೊಂಡ ಈ ದುಷ್ಕೃತ್ಯ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಕೆಲವರು ಹೇಳುವ ಪ್ರಕಾರ ಈ ವ್ಯಕ್ತಿ ಹಿಂದೆ ಕೂಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಈ ಭೀಕರ ಕೊಲೆ ಪ್ರಕರಣವನ್ನು ಶೀಘ್ರವಾಗಿ ಬಗೆಹರಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ತಂಡ ಹಾಗೂ ಮುಂಡಗೋಡು ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ. ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತುಪಡಿಸಿದೆ.

ಮಳಗಿಯಲ್ಲಿ ನಡೆದ ಈ ಘಟನೆ ಒಂದು ದೊಡ್ಡ ಪಾಠವನ್ನು ನೀಡುತ್ತದೆ — ಕೆಲವೊಮ್ಮೆ ಅಪರಿಚಿತರಿಗಿಂತ ಪರಿಚಿತರು ಅಪಾಯಕಾರಿಯಾಗಬಹುದು. ನಮ್ಮ ಮುಂದೆ ನಗುಮುಖದಲ್ಲಿ ಕಾಣುವ ವ್ಯಕ್ತಿಯೇ ಒಳಗಿನಿಂದ ದುಷ್ಕೃತ್ಯಕ್ಕೆ ಯೋಚಿಸಿರಬಹುದು ಎಂಬುದನ್ನು ಈ ಘಟನೆ ಸತ್ಯಸತ್ಯವಾಗಿ ತೋರಿಸಿದೆ.

ಮಳಗಿಯ ಈ ಬಿಬತ್ಸವಾದ ಕೊಲೆ, ಪರಿಚಯವೂ ಒಮ್ಮೊಮ್ಮೆ ಅಪಾಯವನ್ನು ತರುತ್ತದೆ. ಕೊಲೆಗೇಡುಕರು ನಮ್ಮ ಮುಂದೆ ಇರುತ್ತಾರೆ ಎನ್ನುವುದು ಸಾಕ್ಷಿ ಸಮೇತ ತೋರಿಸಿಕೊಟ್ಟಿದೆ.

ನಂಬಿಕೆಯೇ ಸಾವನ್ನು ತರುತ್ತದೆ ಎಂದರೆ ಬದುಕಲು ಅದೇಷ್ಟು ಎಚ್ಚರ ಬೇಕು ಯೋಚನೆ ಮಾಡಿ. ನಂಬಿಕೆ ಎಂಬುದು ಬದುಕಿನ ಆಧಾರವಾದರೂ, ಅದೇ ಸಮಯದಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ದುರಂತ ಮತ್ತೆ ನೆನಪಿಸಿದೆ. “ನಂಬಿಕೆ ಜೀವನವನ್ನು ಉಳಿಸಬಹುದು… ಆದರೆ ತಪ್ಪಾದ ವ್ಯಕ್ತಿಯ ಮೇಲೆ ಇಟ್ಟ ನಂಬಿಕೆ ಜೀವವನ್ನೇ ಕಸಿದುಕೊಳ್ಳಬಹುದು” ಎಂಬ ಕಠಿಣ ಸತ್ಯವನ್ನು ಮಳಗಿಯ ಈ ಘಟನೆ ಎಲ್ಲರಿಗೂ ಅರಿವಾಗಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!