ಶಿಕ್ಷಣ ಇಲಾಖೆಯ ಎರಡು ಆದೇಶಗಳು: ಸಮಾಲೋಚನಾ ಸಭೆಗಳು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ
ಪ್ರಮುಖ ಸುದ್ದಿಯ ಸಾರಾಂಶ:
- ಶಿಕ್ಷಣ ಇಲಾಖೆಯಿಂದ 30-06-2025 ಮತ್ತು 01-07-2025 ರಂದು ಎರಡು ಆದೇಶಗಳು ಹೊರಡಿಸಲಾಗಿದೆ
- ಪ್ರತಿ ತಿಂಗಳ ಮೊದಲ ಬುದವಾರ, ಗುರುವಾರ ಮತ್ತು ಶುಕ್ರವಾರ ನಡೆಯುತ್ತಿದ್ದ ಕಾರ್ಯಕ್ರಮ ಸ್ಥಗಿತ
- ಆದೇಶದಲ್ಲಿದೆ ಗಂಭೀರ ಆದೇಶ ಮತ್ತು ಕ್ರಮಗಳು
- ಎಲ್ಲದಕ್ಕೂ ಉಪನಿರ್ದೇಶಕರೇ ಹೊಣೆ
- ಜಿಲ್ಲಾಧಿಕಾರಿಗಳನ್ನೂ ಬಿಟ್ಟಿಲ್ಲ
ಒಂದರ ಹಿಂದೆ ಮತ್ತೊಂದು ಎನ್ನುವಂತೆ ಶಿಕ್ಷಣ ಇಲಾಖೆಯಿಂದ ಹೊರಡಿಸಿದ್ದ ಎರಡು ಆದೇಶಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತು ವ್ಯಾಟ್ಸಪ್ ಗಳ ಮುಖಾಂತರ ಎಲ್ಲ ಶಿಕ್ಷಕರ ಕೈಗೆ ದೊರೆತಾಗಿದೆ. ಒಂದನೇ ಆದೇಶ ದಿನಾಂಕ 30-06-2025 ರದ್ದು ಮತ್ತು ಮತ್ತೊಂದು 01-07-2025 ರದ್ದು, ಈ ಎರಡು ಆದೇಶದ ಪರಿಣಾಮ ಪ್ರತಿ ತಿಂಗಳಿನ ಮೊದಲ ಬುದವಾರ, ಗುರುವಾರ ಮತ್ತು ಶುಕ್ರವಾರ ಪ್ರಾರಂಭಿಸಬೇಕಿದ್ದ ಸಮಾಲೋಚನಾ ಸಭೆಗಳೇ ಸಧ್ಯಕ್ಕೆ ನಿಲ್ಲಿಸಿದ್ದಾರೆ. ಶಾಲೆಗಳಲ್ಲಿ ಪ್ರತೀ ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುತ್ತಿದ್ದ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇಲಾಖೆಯ ಜೊತೆಗೆ ಅನೇಕ ಜಿಲ್ಲೆಯಾದ್ಯಂತ ಶಿಕ್ಷಣ ಸುಧಾರಣೆಗೆ ನಿಂತಿದ್ದ ಅಜಿಮ್ ಪ್ರೇಮ್ಜಿ ಪೌಂಡೇಷನ್ನವರ ಕನಸಿನ ಕೂಸಾಗಿದ್ದ ಕ್ಲಸ್ಟರ್ ಸಮಾಲೋಚನಾ ಸಭೆಯನ್ನೇ ನಿಲ್ಲಿಸಿಬಿಟ್ಟಿದೇ ಆ ಆದೇಶ.
30-6-2025ರ ಆದೇಶದಲ್ಲಿ ಶಾಲೆಯಿಂದ ಶಿಕ್ಷಕರು ಹೊರಗುಳಿಯುವುದನ್ನು ತಡೆಯುವ ಸಲುವಾಗಿ ಶಿಕ್ಷಕರನ್ನ ಯಾವುದೇ ತರಬೇತಿಗಳಿಗೆ ಅಥವಾ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನಾಗಿ ನಿಯೋಜಿಸದಿರಲು ಅಥವಾ ಬಳಸದಿರಲು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದಾರೆ ಹಾಗಾಗಿ 2025-26 ನೇ ಸಾಲಿನ ವಿಭಾಗವಾರು ಪ್ರಗತಿ ಪರಿಶೀಲನ ಸಭೆಯಲ್ಲಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ ಪರಿಣಾಮ ಇನ್ನು ಎಲ್ಲಾ ತರಬೇತಿಯ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕಡ್ಡಾಯವಾಗಿ ಸಿ.ಆರ್.ಪಿ., ಬಿ. ಆರ್. ಪಿ., ಇ. ಸಿ. ಓ., ವಿಷಯ ಪರಿವೀಕ್ಷಕರು, ಉಪನ್ಯಾಸಕರು ಹಾಗೂ ಹಿರಿಯ ಉಪನ್ಯಾಸಕರು ಮತ್ತು ಜಿಲ್ಲಾ ಮತ್ತು ಬ್ಲಾಂಕ್ ಬ್ಲಾಕ್ ಹಂತದ ಶಿಕ್ಷಣಾಧಿಕಾರಿಗಳ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಮಾತ್ರ ಬಳಸಲು ಸೂಚಿಸಿದೆ.
ಆದರೆ ಶಿಕ್ಷಕರು ಸಮಾಲೋಚನಾ ಕಾರ್ಯಗಾರಗಳಂತಹ ಸಂದರ್ಭದಲ್ಲಿ ಶಿಬಿರಾರ್ಥಿಗಳಾಗಿ ಭಾಗವಹಿಸುತ್ತಿರುವಾಗ ಅವರು ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ಅಧಿವೇಶನಗಳಲ್ಲಿ ಅವಕಾಶಗಳನ್ನು ನೀಡಬಹುದು. ಪ್ರಾತ್ಯಕ್ಷಿಕೆಗಳಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಬಹುದು. ಆದರೆ ಸಂಪನ್ಮೂಲ ವ್ಯಕ್ತಿಯಾಗಿ ಇನ್ನೊಂದು ಕೇಂದ್ರಕ್ಕೆ ಶಿಕ್ಷಕರನ್ನ ಯಾವುದೇ ಕಾರಣಕ್ಕೂ ನಿಯೋಜಿಸಬಾರದೆಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ದಿನಾಂಕ 01-07-25ರ ಆದೇಶದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿಯೇ ಹಾಜರಿದ್ದು ಶಿಕ್ಷಣದ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರತಿದಿನ ಶಾಲೆಯ ಹಂತದಲ್ಲಿ ಬೋಧನೆ ಮತ್ತು ಕಲಿಕೆ ನಡೆಸಲು ಅನುಕೂಲವಾಗಬೇಕು, ಸರ್ಕಾರಿ ಶಾಲೆಗಳಲ್ಲಿ ಕಲಿಕೆಯನ್ನ, ಫಲಿತಾಂಶಗಳನ್ನ ಸುಧಾರಿಸಲು ಮತ್ತು ಉತ್ತಮ ಬೋಧನೆ ನೀಡಲು ಶಿಕ್ಷಕರು ಹಾಗೂ ಶಾಲ ಮುಖ್ಯೋಪಾಧ್ಯಾಯರು ಸಂಪೂರ್ಣವಾಗಿ ಶಾಲೆಯಲ್ಲಿ ಹಾಜರಿರುವುದು ಅತ್ಯಂತ ಅಗತ್ಯವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಎಲ್ಲಾ ಜಿಲ್ಲೆಯ ಉಪ ನಿರ್ದೇಶಕರುಗಳಿಗೆ ಎಲ್ಲಾ ತಾಲೂಕಿನ ಅಧಿಕಾರಿಗಳಿಗೆ ಡಯಟ್ ಪ್ರಾಂಶುಪಾಲರುಗಳಿಗೆ ಮತ್ತು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯ ರಾಜ್ಯ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.
ಆದೇಶದಲ್ಲಿರುವಂತೆ ಯಾವುದೇ ಶಿಕ್ಷಕರನ್ನು ಶಾಲಾ ಮುಖ್ಯೋಪಾಧ್ಯಾಯರನ್ನ ಯಾವುದೇ ತರಬೇತಿ ಕಾರ್ಯಕ್ರಮಗಳಿಗೆ, ಕಾರ್ಯಾಗಾರಗಳಿಗೆ, ಸಭೆಗಳಿಗೆ ಇತರ ಚಟುವಟಿಕೆಗಳಿಗೆ ಶಾಲಾ ದಿನಗಳಲ್ಲಿ ಮತ್ತು ಶಾಲಾ ಸಮಯದಲ್ಲಿ ನಿಯೋಜನೆಗಳ ಮೂಲಕ ಕಳುಹಿಸಬಾರದು, ಉಳಿದ ಇಲಾಖೆಯವರು ಕೂಡ ಶಿಕ್ಷಕರಿಗೆ ಯಾವುದೇ ರೀತಿ ಆದೇಶಗಳ ಮುಖಾಂತರ ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ. ಶಾಲಾ ಸಮಯದಲ್ಲಿ ಶಾಲಾ ಶಿಕ್ಷಕರು ಮತ್ತು ಶಾಲಾ ಮುಖ್ಯೋಪಾಧ್ಯಾಯರ ಯಾವುದೇ ಸಭೆಗಳನ್ನು ಕರೆಯಬಾರದು ಅಥವಾ ವಿಡಿಯೋ ಕಾನ್ಫರೆನ್ಸ್ಗೆ ಹಾಜರಾಗಲು ಕೂಡ ಸೂಚಿಸಬಾರದು. ಒಟ್ಟು ಇದೆಲ್ಲಾ ಕಾರಣದಿಂದಾಗಿ ಶಾಲೆಯ ತರಗತಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿದೆ.
ಮತ್ತೆ ಮುಂದುವರೆದು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಅವರ ಶಾಲೆಯ ಹೊರಗಡೆ ವಿವಿಧ ಕಾರ್ಯಕ್ರಮಗಳ ಪ್ರೇಕ್ಷಕರಾಗಿ ಭಾಗವಹಿಸಲು ಅಥವಾ ಕರೆದುಕೊಂಡು ಹೋಗಲೇಬಾರದು ಎಂಬುದಾಗಿ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ.
ಶಾಲೆಯ ದಿನಗಳಲ್ಲಿ ಯಾವುದೇ ಬಾಹ್ಯ ಪರೀಕ್ಷೆಗಳನ್ನ, ಅಂದರೆ ಕೆ.ಪಿ.ಎಸ್ಸಿ.ಯ ಪರೀಕ್ಷೆಗಳು ರಾಜ್ಯ/ಕೇಂದ್ರ ಸರ್ಕಾರದ ಖಾಸಗಿ ಸಂಸ್ಥೆಗಳ ಪರೀಕ್ಷೆಗಳನ್ನ ಶಾಲೆಯ ಆವರಣದಲ್ಲಿ ನಡೆಸುವುದನ್ನು ಈ ಆದೇಶ ನಿರ್ಬಂಧಿಸುತ್ತದೆ. ಒಂದು ವೇಳೆ ಪರೀಕ್ಷೆಯನ್ನು ನಡೆಸಬೇಕಾದಲ್ಲಿ ಅದು ಸಾರ್ವಜನಿಕ ರಜೆ ಬೇಸಿಗೆ ರಜೆಯ ಸಂದರ್ಭದಲ್ಲಿ ಮಾತ್ರ ನಿಯಮಗಳಂತೆ ನೀಡುವುದು, ಇದಕ್ಕೆ ತಪ್ಪಿದರೆ ಉಪನಿರ್ದೇಶಕರು, ಶಿಕ್ಷಣಾಧಿಕಾರಿಗಳು ಮತ್ತು ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿದೆ.
ಉಪ ನಿರ್ದೇಶಕರು, ಶಾಲಾ ಮುಖ್ಯೋಪಾಧ್ಯಾಯರು ಅಥವಾ ಇಲಾಖೆಯ ಯಾವುದೇ ಮಟ್ಟದ ಅಧಿಕಾರಿಗಳು, ಇಲಾಖೆಯ, ಖಾಸಗಿ ಸಂಸ್ಥೆಗಳ ಅಥವಾ ಯಾವುದೇ ಪಾಲುದಾರರು ಸಾಫ್ಟ್ವೇರ್ಗಳಲ್ಲಿ ಡೇಟಾ ಎಂಟ್ರಿ ಮಾಡುವಂತೆ ಶಿಕ್ಷಕರನ್ನ ಅಥವಾ ಶಾಲಾ ಮುಖ್ಯೋಪಾಧ್ಯಾಯರಿಗೆ ಮೌಖಿಕ ಅಥವಾ ಲಿಖಿತ ಆದೇಶಗಳನ್ನು ನೀಡಬಾರದು ಇಂತಹ ಆದೇಶಗಳನ್ನು ಹೊರಡಿಸಿದೆ ಅಂತಹ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಠಿಣವಾಗಿ ತಿಳಿಸಿದ್ದಾರೆ
ಸರಿ, ಈ ಆದೇಶದಿಂದ ಮುಂದೇನು? ಇದರಿಂದಾಗಿ ಶಿಕ್ಷಕರು ಶಾಲೆಯಲ್ಲಿ ಇದ್ದು ಬೋಧನೆಗೆ ತೊಡಗಿಕೊಳ್ಳಲು ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಿದಂತಾಗುತ್ತದೆ. ಶಾಲೆಯ ಅವಧಿಗಳಲ್ಲಿ ಅನ್ಯ ಕಾರ್ಯಗಳಿಗೆ ತರಬೇತಿಗಳಿಗೆ ಸಮಯವನ್ನು ವ್ಯಯಿಸಲಾಗುತ್ತದೆ ಇದರಿಂದಾಗಿ ಬೋಧನೆ ಮಾಡುವ ಅವಧಿಗೆ ಧಕ್ಕೆ ಬರುತ್ತದೆ ಎಂದು ಶಿಕ್ಷಕರ ಒಂದು ದೊಡ್ಡ ಕೂಗಿತ್ತು ಅದಕ್ಕೆ ಈಗ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇದು ಶಿಕ್ಷಕರ ಜಯವೇ ಹೌದು. ಅನೇಕ ಶಿಕ್ಷಕರ ಕನಸೇ ಇದಾಗಿತ್ತು. ಇದರಿಂದ ಶಾಲೆಯಲ್ಲಿ ಇದ್ದು ಬೋಧಿಸಬೇಕು ಮತ್ತು ಕಲಿಸಬೇಕು ಅನ್ನುವಂತಹ ಮನಸ್ಸುಳ್ಳ ಶಿಕ್ಷಕರಿಗೆ ತುಂಬಾ ಸಂತೋಷ ಆದುದರಲ್ಲಿ ಎರಡು ಮಾತಿಲ್ಲ.
ಈ ಆದೇಶಗಳಿಂದ ಶಿಕ್ಷಕ ವಲಯದಲ್ಲಿ ತುಂಬಾ ಹರುಷದ ವಾತಾವರಣ ನಿರ್ಮಿಸಿದೆ. ಎಲ್ಲಾ ಶಿಕ್ಷಕರು ಈ ಆದೇಶದ ಪರವಾಗಿ ಮಾತನಾಡುತ್ತಿದ್ದಾರೆ ಆದೇಶ ಬಂದುದರಿಂದಾಗಿ ಇನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಲಿಕೆಯ ಗುಣಮಟ್ಟ ಎತ್ತರಕ್ಕೆ ಏರುತ್ತದೆ ಎನ್ನುವುದು ಪಾಲಕರ ಸಂತೋಷಕ್ಕೂ ಕೂಡ ಕಾರಣವಾಗಿದೆ. ಶಿಕ್ಷಣ ಪ್ರೇಮಿಗಳು ಕೂಡ ಇದರ ಕುರಿತು ಉತ್ಸಾಹದಿಂದ ಮಾತನಾಡತೊಡಗಿದ್ದಾರೆ.
ಮತ್ತು ಮುಂದುವರೆದು ಈ ಆದೇಶ ನಿಜವಾಗಲೂ ಅನುಷ್ಠಾನಕ್ಕೆ ಬರುತ್ತದೆಯೇ!!! ಅಥವಾ ಇದರ ವಿರುದ್ಧವಾಗಿ ಇನ್ಯಾವುದಾದರು ಆದೇಶ ಬಂದು ಶಿಕ್ಷಕರನ್ನ ಬೇರೆಬೇರೆ ಅನ್ಯಕಾರ್ಯಗಳಿಗೆ ಕರೆಯುತ್ತಾರೆಯೇ ಎಂಬುದು. ಈಗ ಪ್ರೌಢಶಾಲೆಗಳ ಬಿ.ಆರ್.ಪಿ.ಗಳು ತಾಲೂಕಿಗೆ ಇಬ್ಬರೇ ಇರುತ್ತಾರೆ, ಆದೇಶದ ಪ್ರಕಾರ ಪ್ರೌಢ ಶಾಲೆಯ ಎಲ್ಲಾ ವಿಷಯಗಳ ತರಬೇತಿಗೆ ಬಿ.ಆರ್.ಪಿ.ಗಳು ನಿಜವಾಗಿಯೂ ಸಂಪನ್ಮೂಲರೇ ಎಂಬ ಪ್ರಶ್ನೆ ಕಾಡುತ್ತದೆ. ಉದಾಹರಣೆಗೆ, ಗಣಿತ ವಿಷಯದ ಶಿಕ್ಷಕ ವಿಜ್ಞಾನ ಬಿ.ಆರ್.ಪಿ.ಯಾದರೆ ವಿಜ್ಞಾನ ವಿಷಯ ಶಿಕ್ಷಕರಿಗೆ ಹೇಗೆ ಸಂಪನ್ಮೂಲ ವ್ಯಕ್ತಿಯಾದಾನೂ? ಕಲಾವಿಷಯದ ಬಿ.ಆರ್.ಪಿ. ಇಂಗ್ಲೀಷ್ ವಿಷಯಕ್ಕೆ ಮತ್ತು ಹಿಂದಿ ವಿಷಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವಷ್ಟು ಸಂಪನ್ಮೂಲನೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಅಷ್ಟಕ್ಕೂ ಶಿಕ್ಷಕರ ಸಂಪನ್ಮೂಲತೆಯ ಬಗ್ಗೆಯೇ ಪ್ರಶ್ನೆ ಎದ್ದ ಹಾಗಾಗುವುದಿಲ್ಲವೇ? ಪಠ್ಯ ಪುಸ್ತಕ ರಚನೆಗೂ ಶಿಕ್ಷಕರನ್ನ ಕರೆಯುವುದನ್ನ ಇಲಾಖೆ ನಿಲ್ಲಿಸುತ್ತದೆಯೇ? ಹೀಗೆ ಕೇಳಿಕೊಂಡರೆ ಬಹಳಷ್ಟು ಪ್ರಶ್ನೆಗಳು ಬರಬಹುದು. ಈ ಆದೇಶದ ಇಚ್ಛಾಶಕ್ತಿ ಎಷ್ಟು ದಿವಸಗಳ ಕಾಲದ್ದು ಅನ್ನುವ ಒಂದು ಆತಂಕ ಕೂಡ ಶಿಕ್ಷಕರಲ್ಲಿ ಇದೆ ಯಾಕೆಂದರೆ ಕೆಲವೊಬ್ಬ ಪ್ರಭಾವಶಾಲಿ ವರ್ಗದವರು ಶಿಕ್ಷಕರನ್ನ ದುಡಿಸಿಕೊಳ್ಳುವ ವಿಚಾರವುಳ್ಳವರು, ಈ ಆದೇಶವನ್ನು ಗಾಳಿಗೆ ತೂರುವುದರಲ್ಲಿ ಎರಡು ಮಾತಿಲ್ಲ ಹಾಗಾಗಿ ಆದೇಶ ಹೊರಡಿಸಿದ ಸರಕಾರ ಈ ಆದೇಶವನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಿದ್ದಲ್ಲಿ ನಮ್ಮ ಶಿಕ್ಷಕರಿಂದ ಅತ್ಯುತ್ತಮ ಮಟ್ಟದ ಶೈಕ್ಷಣಿಕ ಸುಧಾರಣೆಯನ್ನು ರಾಜ್ಯದಲ್ಲಿ ಕಾಣಬಹುದು ಎಂಬ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು.
ಕೊನೆ ಹನಿ
ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ ಎಂಬುದಕ್ಕೆ ಈ ಆದೇಶವೇ ಸಾಕ್ಷಿ. ಶಿಕ್ಷಕರ ಬೋಧನೆಯ ಅವಧಿಗೆ ಸಮಯವೇ ಸಿಗುತ್ತಿಲ್ಲ, ಅನ್ಯ ಕಾರ್ಯಗಳಿಗೆ ನಿಯೋಜನೆ ಗೊಳಿಸುತ್ತಾರೆ ಅನ್ನೋ ಒಂದು ಕೂಗಿತ್ತು, ಸರಕಾರದಿಂದ ಇಂತಹ ಒಂದು ದಿಟ್ಟ ಕ್ರಮ ಮೂಡಿಬಂದಿದ್ದಕ್ಕೆ ರಾಜ್ಯದ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಇನ್ನೇನು ಶಿಕ್ಷಕ ಸಂಘದ ಚುನಾವಣೆಗಳೂ ಸಮೀಪ ಬರುತ್ತಿದೆ, ಬಹುಶಃ ಶಿಕ್ಷಕರ ಸಂಘದವರೇನಾದರೂ ಶಿಕ್ಷಕರ ಪ್ರೀತಿ ಗಿಟ್ಟಿಸಿಕೊಳ್ಳಲು ಅವರ ಸೆಂಟಿಮೆಂಟಗಳೊಂದಿಗೆ ಆಟವಾಡಲು, ತಮ್ಮ ಪ್ರಭಾವ ಬೀರಿ ಆದೇಶ ಹಾಕಿಸಿದ್ದಾರೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ, ಅಷ್ಟೆಲ್ಲಾ ಕೆಳ ಮಟ್ಟಕ್ಕೆ ಅವರು ಇಳಿಯಲಿಕ್ಕಿಲ್ಲ, ಎಷ್ಟೆಂದರೂ ಶಿಕ್ಷಕರಲ್ಲವೇ, ಶಿಕ್ಷಕರು ಯಾವಾಗಲೂ ಸರಿಯನ್ನೇ ಮಾಡುತ್ತಾರೆ ಎಂಬ ದೃಢ ವಿಶ್ವಾಸ ನಮಗಿದೆ.
ಅದೇನೆ ಇದ್ದರೂ ಆದೇಶ ಹೊರಡಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ವರಿ ಅವರು ಯೋಚಿಸಿ, ಯೋಜಿಸಿ ಆದೇಶ ಹೊರಡಿಸಿದ್ದಾರೆ ಎಂದೇ ರಾಜ್ಯದ ಮುಗ್ದ ಜನತೆಯ ಭಾವನೆ. ಇನ್ನು ಯಾರದ್ದೋ ತೆವಲಿಗೆ ಆದೇಶವನ್ನ ಗಾಳಿಗೆ ತೂರಿದ್ದೇ ಆದರೆ ಆದೇಶ ಹೊರಡಿಸಿದವರಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುವುದಿಲ್ಲ. ಅದೇನೇ ಇದ್ದರೂ ರಾಜ್ಯದ ಜನತೆಯ ಪರವಾಗಿ ಪ್ರಧಾನ ಕಾರ್ಯದರ್ಶಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನ ಈ ಮೂಲಕ ಸಂಸ್ಥೆ ಸಲ್ಲಿಸುತ್ತೇವೆ.